Specials
ಹಳ್ಳಿ ಹುಡುಗಿಗೆ ಆತ್ಮ ವಿಶ್ವಾಸ ತುಂಬಿ...
ರಾಜಧಾನಿಯಿಂದ ,

ಸೇಡಂ ಶ್ರೀನಿವಾಸ
ಹಿರಿಯ ಪತ್ರಕರ್ತರು ಬೆಂಗಳೂರು
ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು9 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಹಳ್ಳಿಯ ಮಣ್ಣಿನಲ್ಲಿ ಹುಟ್ಟಿ ಬೆಳೆದ ಹುಡುಗಿಯ ಕಣ್ಣಲ್ಲಿ ಮತ್ತು ಮನಸ್ಸಿನಲ್ಲಿ ಏನೆಲ್ಲಾ ಕನಸುಗಳಿಗೆ ಕೊರತೆಯಿಲ್ಲ. ಆದರೆ, ಆ ಕನಸುಗಳನ್ನು ನನಸು ಮಾಡಿಕೊಳ್ಳಲು ಬೇಕಾದ ಆತ್ಮ ವಿಶ್ವಾಸಕ್ಕೆ ಹಲವು ಬಾರಿ ಸಮಾಜದ ಕಟ್ಟು ಪಾಡುಗಳು, ಆರ್ಥಿಕ ಅಡೆ-ತಡೆಗಳು, ಶಿಕ್ಷಣದ ಕೊರೆತೆ ಅಡ್ಡಿಯಾಗುವುದು ಸಹಜ. “ನನ್ನಿಂದ ಆಗುತ್ತಾ ?” ಎಂಬ ಪ್ರಶ್ನೆ ಅವಳ ಮನಸ್ಸಿನಲ್ಲಿ ಮನೆ ಮಾಡಿದರೆ, ಅವಳಲ್ಲಿರುವ ಅಪಾರ ಪ್ರತಿಭೆ ಒಳಗೇ ಉಳಿದುಬಿಡುತ್ತದೆ. ಹಾಗಾಗಿ ಹಳ್ಳಿ ಹುಡುಗಿಗೆ ಆತ್ಮ ವಿಶ್ವಾಸ ತುಂಬುವುದು ಕೇವಲ ಒಬ್ಬ ವ್ಯಕ್ತಿಗೆ ಸಹಾಯ ಮಾಡಿದಂತೆ ಅಲ್ಲ, ಅದು ಒಂದು ಇಡೀ ಕುಟುಂಬ, ಒಂದು ಹಳ್ಳಿ, ಒಂದು ತಲೆ ಮಾರನ್ನೇ ಬದಲಾಯಿಸಿದಂತೆ.
ಆತ್ಮ ವಿಶ್ವಾಸದ ಕೊರತೆ ಹಳ್ಳಿ ಹುಡುಗಿಯರಲ್ಲಿ ಉದ್ಬವಿಸಲು ಚಿಕ್ಕ ವಯಸ್ಸಿನಿಂದಲೇ “ನೀನು ಹುಡುಗಿ, ಹೀಗೆ ಇರಬೇಕು, ಹಾಗೆ ಮಾತನಾಡಬಾರದು’ ಎಂಬ ಇತ್ಯಾದಿಗಳ ಕಟ್ಟು ಪಾಡು ಮಾತುಗಳ ಮಧ್ಯೆ ಬೆಳೆಯುತ್ತಾರೆ. ಶಾಲೆಗೆ ಹೋಗುವುದು ದೂರ, ಮನೆಯ ಕೆಲಸ, ಕೃಷಿಯಲ್ಲಿ ಭಾಗಿ, ಬಾಲ್ಯ ವಿವಾಹದ ಭಯ, ಋತುಚಕ್ರದ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು. ಇವೆಲ್ಲವೂಗಳು ಅವಳನ್ನು ಒಳಗೊಳಗೇ ಕುಗ್ಗಿಸುತ್ತವೆ. ತನ್ನ ಧ್ವನಿಗೆ ಬೆಲೆ ಇಲ್ಲ ಎಂಬ ಭಾವನೆ ಬಂದಾಗ ಆತ್ಮವಿಶ್ವಾಸ ತನ್ನಷ್ಟಕ್ಕೆ ತಾನೇ ಕಡಿಮೆಯಾಗುತ್ತದೆ.
ಆತ್ಮ ವಿಶ್ವಾಸದ ಮೊದಲ ಮೆಟ್ಟಲು ಶಿಕ್ಷಣ. ಅಕ್ಷರ ಕಲಿತ ಹುಡುಗಿ ಪ್ರಶ್ನೆ ಕೇಳಲು ಶುರು ಮಾಡುತ್ತಾಳೆ. ಮತ್ತು ಅವಳೇ ಉತ್ತರ ಹುಡುಕುತ್ತಾಳೆ. ಸರ್ಕಾರಿ/ಖಾಸಗಿ ಶಾಲೆ, ಪುಸ್ತಕಾಲಯ, ಇಂದಿನ ಮೊಬೈಲ್ ಮೂಲಕ ಸಿಗುವ ಉಚಿತ ಶಿಕ್ಷಣವನ್ನು ಅವಳಿಗೆ ತಲುಪಿಸಬೇಕು. “ನೀ ಓದಿ ದೊಡ್ಡವಳಾಗಬೇಕು’ ಎಂದು ಒಬ್ಬರು ಹೇಳಿದರೆ ಸಾಕು. ಅವಳಲ್ಲಿ ಆತ್ಮ ವಿಶ್ವಾಸದ ಬೆಳಕು ಮೂಡುತ್ತದೆ. ಓದಿನ ಜೊತೆ ಜೊತೆಗೆ ಕಂಪ್ಯೂಟರ್. ಇಂಗ್ಲೀಷ ಮಾತನಾಡುವ ಸಣ್ಣ ತರಬೇತಿ, ಸಾಮಾನ್ಯ ಜ್ಞಾನ ಇವೆಲ್ಲವೂ ಅವಳನ್ನು ನಗರದ ಹುಡುಗಿಯರಿಗೆ ಸಮನಾಗಿ ಬೆಳೆಯಲು ಸಹಕಾರಿ.
ಹಳ್ಳಿ ಹುಡಿಗಿಯರಿಗೆ ಕೌಶಲ್ಯ ಕಲಿಸಿ, ಕೈಗೆ ಕೆಲಸ ಕೊಡಿ ಇದರಿಂದ ಆತ್ಮ ವಿಶ್ವಾಸ ಹೆಚ್ಚುವುದು. “ನನ್ನಿಂದಲೂ ಏನನ್ನಾದರೂ ಮಾಡಲು ಸಾಧ್ಯ’ ಎಂಬ ಅನುಭವದ ಆಶಾ ಕಿರಣ ಅವಳಲ್ಲಿ ಹುಟ್ಟುತ್ತದೆ. ಹೊಲಿಗೆ, ಕಸೂತಿ, ಸಾವಯವ ಕೃಷಿ, ಹೈನುಗಾರಿಕೆ, ಜೇನು ಸಾಕಣೆ, ಯೂಟ್ಯೂಬ್ ವಿಡಿಯೋ ಮಾಡುವುದು, ಸ್ವಸಹಾಯ ಸಂಘದ ಲೆಕ್ಕ ಬರೆಯುವುದು. ಹೀಗೆ ಯಾವುದಾರು ಒಂದು ಕೌಶಲ್ಯ ಅವಳಿಗೆ ಸ್ವಂತ ದುಡಿಮೆಯ ದಾರಿ ತೋರಿಸುತ್ತದೆ. ತನ್ನ ದುಡ್ಡಿನಲ್ಲಿ ತಾನು ಒಂದು ಪುಸ್ತಕ ಕೊಂಡಾಗ, ತಂದೆ-ತಾಯಿಗೆ ಬಟ್ಟೆ ಕೊಡಿಸಿದಾಗ, ಬರುವ ಋಷಿಯೇ ಆತ್ಮ ವಿಶ್ವಾಸದ ಮೊದಲ ದಿಟ್ಟ ಹೆಜ್ಜೆ ಇದಾಗುತ್ತದೆ.
ಬದುಕಿನಲ್ಲಿ ಯಶಸ್ವಿಗೆ ಬೇಕಾದ ಅತ್ಯಂತ ದೊಡ್ಡ ಸಂಪತ್ತು ಆತ್ಮವಿಶ್ವಾಸ. ಹಣ, ವಿದ್ಯೆ, ಅವಕಾಶಗಳು ಇಲ್ಲದಿದ್ದರೂ ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿ ಮುಂದೆ ಸಾಗುತ್ತಾನೆ. ಆಗ ಎಲ್ಲರ ಪ್ರೋತ್ಸಾಹ ಅಗತ್ಯ. ಎಲ್ಲವೂ ಹೊಂದಿದ ವ್ಯಕ್ತಿ ಆತ್ಮ ವಿಶ್ವಾಸ ಇಲ್ಲದೇ ಹಿಂದೆ ಉಳಿಯುತ್ತಾನೆ. ತನ್ನ ಸಾಮರ್ಥ್ಯ ಮತ್ತು ಇತಿ-ಮಿತಿಗಳನ್ನು ಅರಿತು ಪ್ರಯತ್ನಿಸಿದರೆ ಸಾಧಿಸಬಲ್ಲೆ ಎಂದು ನಂಬುವುದೇ “ಆತ್ಮವಿಶ್ವಾಸದ ಮಹತ್ವ’
ಆತ್ಮವಿಶ್ವಾಸ ಧ್ಯರ್ಯವನ್ನು ಕೊಡುತ್ತದೆ. ಪರೀಕ್ಷೆಯಲ್ಲಿ, ವೇದಿಕೆಯ ಮೇಲೆ, ಉದ್ಯೋಗದ ಸಂದರ್ಶನದಲ್ಲಿ, ಹೊಸ ವ್ಯವಹಾರವನ್ನು ಆರಂಭಿಸುವಲ್ಲಿಯೂ ಸಹ. ಸ್ವಾಮಿ ವಿವೇಕಾನಂದರು ಹೇಳಿದಂತೆ “ನಿನ್ನ ಮೇಲೆ ನಿನಗೆ ನಂಬಿಕೆ ಇಲ್ಲದಿದ್ದರೆ ದೇವರ ಮೇಲಿನ ನಂಬಿಕೆಯೂ ವ್ಯರ್ಥ’ ಆತ್ಮವಿಶ್ವಾಸ ಇದ್ದಾಗ ವ್ಯಫಲ್ಯವೂ ಒಂದು ಪಾಠವಾಗುತ್ತದೆ. ಇಲ್ಲದಿದ್ದಾಗ ವೈಫಲ್ಯವೂ ದೊಡ್ಡ ಹೊಡೆತವಾಗುತ್ತದೆ.
ಇದನ್ನು ಹಳ್ಳಿ ಹುಡಿಗಿಯರಿಗೆ ಮನದಟ್ಟಾಗುವಂತೆ ತಿಳಿಹೇಳುವುದು ಇಂದಿನ ಪ್ರಮುಖ ಆದ್ಯತೆಯಾಗಲಿ. ಬಾಲ್ಯದಲ್ಲಿ ಕೇಳಿದ ನಕಾರಾತ್ಮಕ ಮಾತುಗಳು, ಇತರರೊಂದಿಗೆ ಹೋಲಿಕೆ, ಸಾಮಾಜಿಕ ಜಾಲತಾಣಗಳ್ಲಲಿ ಇತರರ ಯಶಸ್ಸುಗೆ ಸಕಾರಾತ್ಮಕ ಸ್ಪಂದನೆಯ ತಿಳುವಳಿಕೆ ನೀಡಬೇಕು.
ಹಳ್ಳಿಯಿಂದಲೇ ಮೇಲೆ ಬಂದ ಅನೇಕ ಮಹಿಳೆಯರ ಯಶೋ ಕಥೆಗಳನ್ನು ಅವಳಿಗೆ ತಿಳಿಹೇಳಬೇಕು. ಜೀವಂತ ಮಾದರಿಗಳು “ಅವಳಿಂದ ಆಗಿದ್ದರೆ ನನ್ನಿಂದಲೂ ಆಗುತ್ತದೆ ಎಂಬ ಬಲವಾದ ನಂಬಿಕೆ ಬಹಳ ಶಕ್ತಿಶಾಲಿ. ಇದು ಆತ್ಮ ವಿಶ್ವಾಸದ ಎರಡನೇ ಮೆಟ್ಟಲು. ಟೀಕಿಸುವ ಬದಲು ಅವಳ ಮನಸ್ಸನ್ನು ಪ್ರೋತ್ಸಾಹಿಸಿ. ಅವಳಿಗೆ ಸಣ್ಣ ಸಣ್ಣ ವೇದಿಕೆ ಸೃಷ್ಟಿಸಿ. ಶಾಲಾ ಕಾರ್ಯಕ್ರಮಗಳಲ್ಲಿ ನಿರೂಪಣೆ, ಗ್ರಾಮಗಳಲ್ಲಿ ಜರುಗುವ ಜಾತ್ರೆಯಲ್ಲಿ ಮಾತಾಡುವ ಅವಕಾಶ ನೀಡಿ ಪ್ರತಿ ಸಣ್ಣ ಗೆಲುವನ್ನು ತಟ್ಟಿ ಸಂಭ್ರಮಿಸಿ ಇದು ಪ್ರೋತ್ಸಾಹದ ಮಜಲುಗಳು.
ಹಳ್ಳಿ ಹುಡುಗಿ ದುರ್ಬಳಲ್ಲ, ಅವಕಾಶ ಅಗತ್ಯ, ಆತ್ಮ ವಿಶ್ವಾಸ ತುಂಬುವುದು. ಇದರಿಂದ ಅವಳು ಕೇವಲ ತನ್ನ ಬದುಕನ್ನು ಮಾತ್ರವಲ್ಲ, ಇಡೀ ಹಳ್ಳಿಯ ಭವಿಷ್ಯವನ್ನೇ ಬದಲಾಯಿಸ ಬಲ್ಲ ಶಕ್ತಿ ಅವಳಲ್ಲಿ ತಾನಾಗಿಯೇ ಹುಟ್ಟಿಕೊಳ್ಳುತ್ತದೆ.
ಈ ಎಲ್ಲವೂಗಳ ಮಧ್ಯೆ ಹಳ್ಳಿ/ಹೋಬಳಿ ನಂತರ ತಾಲ್ಲೂಕು ಕೇಂದ್ರಗಳಲ್ಲಿ ತನ್ನ ಒಂದು ಹಂತದ ಶಿಕ್ಷಣ ಮುಗಿಸಿದ ನಂತರ ಮುಂದೆ ಓದುವ ಹವ್ಯಾಸ ತಾನಾಗಿಯೇ ಮನಸ್ಸಿನಲ್ಲಿ ಚಿಗುರುತ್ತದೆ. ಮುಂದಿನ ಶಿಕ್ಷಣ ನಗರ ಪ್ರದೇಶಗಳಲ್ಲಿ ಬರುವ ಅನಿವಾರ್ಯತೆ ಹೆಚ್ಚು. ಹಳ್ಳಿ ಹುಡುಗಿಯರಿಗೆ ಆರಂಭದಲ್ಲಿ ನಗರದ ಜೀವನ ಸ್ವಲ್ಪ ಬೆಚ್ಚಿ ಬೀಳುವಂತೆ ಮಾಡುತ್ತದೆ.
ಪದೇ ಪದೇ ಕಾಡುವ ಹಳ್ಳಿಯ ನೆನಪು. ಒಂದೊAದು ಸಂದರ್ಭದಲ್ಲೂ ನಗರಕ್ಕೆ ಹಳ್ಳಿಯನ್ನು ಹೋಲಿಸುತ್ತಲೇ ಇರುತ್ತದೆ. ನಗರ ರಸ್ತೆಗಳಲ್ಲಿ ತಮ್ಮ ಪಾಡಿಗೆ ನಡೆದು ಬರುವ , ಇತರರ ಬಗ್ಗೆ ಕನಿಷ್ಠ ಕುತೂಹಲವನ್ನು ತೋರದ ಜನ ಬರುತ್ತಿದ್ದರೆ ಅವಳಿಗೆ ತಕ್ಷಣ ತನ್ನ ಹಳ್ಳಿಯ ಜನರು ವಿಚಾರಿಸುತ್ತಿದ್ದ ಕ್ಷೇಮ ಸಮಾಚಾರ ನೆನಪಿಗೆ ಬರುವುದು ಸಹಜ. ಕಾಲೇಜಿನ ಅನೇಕ ಸಂದರ್ಭಗಳಲ್ಲಿ ತನ್ನ ಹಳ್ಳಿಯ ನೆನಪಿನ ದಿನಗಳು ಅವಳಿಗೆ ‘ಅಳು’ ತರಿಸದೇ ಇರುವುದಿಲ್ಲ.
ನಗರದ ಹೆಣ್ಣು ಮಕ್ಕಳು ಹೆಚ್ಚಾಗಿ ಶಿಕ್ಷಿತ ಕುಟುಂಬದಿAದ ಬಂದವರಾಗಿದ್ದರಿAದ, ಹಳ್ಳಿ ಹುಡುಗಿಯರಿಗೆ ಅವರ ಭಾಷೆ, ನಡವಳಿಕೆ ಹೊಸ ರೀತಿ ಕಾಣಿಸಿದರೂ ಆಶ್ಚರ್ಯವಿಲ್ಲ. ಅವರೊಂದಿಗೆ ಹಳ್ಳಿ ಹುಡುಗಿಯರು ಮಾತನಾಡಲೂ ಅಳುಕುತ್ತಾರೆ. ಇಲ್ಲಿ ಸ್ವಲ್ಪ ಮಟ್ಟಿನ ಆತ್ಮ ವಿಶ್ವಾಸದ ಕೊರತೆ. ಇದಕ್ಕೆ ಹಳ್ಳಿ ಭಾಷೆ ಅಡ್ಡ. ಹಳ್ಳಿ ಹುಡಿಗಿಯರಿಗೆ ಮುಖ್ಯವಾಗಿ ಎದುರಾಗುವ ಸಮಸ್ಯೆ ನಗರದ ಇಂಗ್ಲೀಷನದು. ಸಾಮಾನ್ಯವಾಗಿ ಹಳ್ಳಿ/ಹೋಬಳಿ/ತಾಲ್ಲೂಕು ಮಟ್ಟದಲ್ಲಿ ಕನ್ನಡ ಮಾಧ್ಯಮ ಕಲಿತ ಹುಡುಗಿ, ನಗರದ ಹುಡುಗಿಯರ ನಾಲಿಗೆಯಲ್ಲಿ ನಲೆದಾಡುವ ಧಾರಾಳ ಇಂಗ್ಲಿಷಿಗೆ ಹೆದರಿ, ಸ್ಪೀಕಿಂಗ ಕೋರ್ಸ್ಗಳನ್ನು ಅರಸುತ್ತಾಳೆ. ಇದು ಈ ಮೊದಲೇ ಸಿಕ್ಕಿದ್ದಲ್ಲಿ ನಗರದ ಹುಡುಗಿಯರಿಗಿಂತ ಮುಂದೆ ಬರಲು ಸಾಧ್ಯ. ಇವೆಲ್ಲವೂ ಹಳ್ಳಿ ಹುಡುಗಿಯರ ಆತ್ಮವಿಶ್ವಾಸದ ಕೊರತೆಯ ಸಂಕೇತಗಳು.
ಯಾರೂ ಹುಟ್ಟು ಪ್ರತಿಭಾವಂತರೂ ಅಲ್ಲ. ಎಲ್ಲರೂ ಭೂಮಿಗೆ ಬಂದ ಮೇಲೇಯೇ ಕಲಿಯಲು ಆರಂಭಿಸಿದ್ದಾರೆ. ಆದ್ದರಿಂದ ಯಾವ ವಿಷಯವೂ ಕಷ್ಟವಾಗಲಾರದು ಎಂಬ ಸರ್ವಕಾಲಿಕ ಸತ್ಯದ ಅರಿವೊಂದು ಮನಸ್ಸಿಗೆ ಅರ್ಥವಾದರೆ ಅರ್ಧ ಆತ್ಮವಿಶ್ವಾಸ ಬಂದAತೆ.
ಹಳ್ಳಿಯ ಹುಡುಗಿ ಅಂದ್ರೆನೆ ಶಕ್ತಿ. ಕೈಯಲ್ಲಿ ಪುಸ್ತಕ ಹಿಡಿದರೆ ನಗುಮುಖದೊಂದಿಗೆ ಹೆಜ್ಜೆ ಹಾಕುತ್ತಾಳೆ. ತನ್ನ ಕನಸಿನೆಡೆಗೆ ದೃಢವಾಗಿ ಆತ್ಮ ವಿಶ್ವಾಸದ ಹೆಜ್ಜೆ ಇಡುತ್ತಾಳೆ. “ನನ್ನ ಕನಸು ದೊಡ್ಡದು, ನನ್ನ ಧ್ಯೆರ್ಯ ಅದಕ್ಕಿಂತ ದೊಡ್ಡದು” ಎಂಬ ಪುಸ್ತಕದ ವಾಣಿ ಅವಳ ಮನಸ್ಸಿನಲ್ಲಿ ಮೂಡುತ್ತದೆ. ನಾನು ಹಳ್ಳಿ ಹುಡಗಿ, ನಾನೇ ಶಕ್ತಿ, ಕಲಿಕೆ ನನ್ನ ಅಸ್ತç ಎಂಬ ಸಂದೇಶ ಪ್ರತಿ ಹಳ್ಳಿ ಹುಡುಗಿಯರ ಮನದಲ್ಲಿ ಮೂಡಿಸುವ ಕೆಲಸವೇ ನಿಜವಾದ ಆತ್ಮವಿಶ್ವಾಸದ ಮಹತ್ವದ ಮೆಟ್ಟಲುಗಳು. ಇದು ಇಂದು ನಮ್ಮೆಲ್ಲರ ಮುಂದೆ ಇರುವ ಸವಾಲು. ಆತ್ಮವಿಶ್ವಾಸ ಒಂದು ದಿನದಲ್ಲಿ ಬರುವಂಥದಲ್ಲ. ಅದು ಪ್ರತಿದಿನದ ಅಭ್ಯಾಸ. ಅದು ಬೆಳಿಗ್ಗೆ ಎದ್ದು ಕನ್ನಡಿಯಲ್ಲಿ ನೋಡಿ “ನಾನು ನನ್ನನ್ನು ನಂಬುತ್ತೇನೆ’ ಎಂದು ಹೇಳುವುದರಿಂದ ಆರಂಭಗೊಳ್ಳಬೇಕು. ಆತ್ಮವಿಶ್ವಾಸ ಹೊಂದಿರುವರು ಇತರರಿಗೆ ಬೆಳಕು ನೀಡುವ ದೀಪದಂತೆ, ತಾನೂ ಬೆಳಗುತ್ತಾನೆ, ಇತರರಿಗೂ ದಾರಿ ತೋರಿಸುತ್ತಾನೆ.
ಆತ್ಮವಿಶ್ವಾಸ ಬೆಳೆಸಿಕೊಳ್ಳುವಲ್ಲಿ - ಸ್ವ-ಸಂವಾದವನ್ನು ಬದಲಾಯಿಸುವುದು. ಸಣ್ಣ ಗುರಿಗಳನ್ನು ಸಾಧಿಸುವುದು. ತಯಾರಿ ಮತ್ತು ಅಭ್ಯಾಸ ಅಗತ್ಯ. ಜ್ಞಾನವೇ ಆತ್ಮ ವಿಶ್ವಾಸದ ಅಡಿಪಾಯ. ವೈಫಲನ್ನು ಒಪ್ಪಿಕೊಳ್ಳುವಲ್ಲಿ ಸೋಲು ಅವಮಾನವಲ್ಲ. ಅದು ಮಾಹಿತಿ. ವಿಶ್ಲೇಷಿಸಿ ಮರಳಿ ಪ್ರಯತ್ನಿಸುವುದೇ ನಿಜವಾದ ಆತ್ಮ ವಿಶ್ವಾಸ.
ಚಿತ್ರ : ಹಳ್ಳಿ ಹುಡುಗಿ ಪುಸ್ತಕದೊಂದಿಗೆ
ಪಟ್ಟಣ ಕಡೆ ಇಟ್ಟ ಹೆಜ್ಜೆಗಳು.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads