📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Literature

ವಿಜಯಾಳ ವೈಧವ್ಯ

ಪ್ರೊ.ಶೋಭಾದೇವಿ ಚೆಕ್ಕಿ

ಪ್ರೊ.ಶೋಭಾದೇವಿ ಚೆಕ್ಕಿ

ನಿವೃತ್ತ ಪ್ರಾಧ್ಯಾಪಕಿ

ಸೋಮವಾರ, ಆಗಸ್ಟ್ 10, 20262 ನಿಮಿಷ ಓದು6 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ವಿಜಯಾಳ ವೈಧವ್ಯ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಸುಸಂಸ್ಕೃತ ಮನೆತನದಲ್ಲಿ ಜನಿಸಿದ್ದ ವಿಜಯಾಳಲ್ಲಿ ಸಹಜವಾಗಿಯೇ ವಿದ್ಯೆ ಮತ್ತು ವಿನಯ ಮನೆಮಾಡಿ ಕೊಂಡಿದ್ದವು. ಮೇಲಾಗಿ ಸ್ಪುರದ್ರೂಪಿಯೂ ಆಗಿದ್ದಳು. ತನ್ನ ಸೌಂದರ್ಯದ ಬಗ್ಗೆ ಆಕೆಗೆ ಅಭಿಮಾನವಿತ್ತೇ ವಿನ: ಅಹಂಕಾರವಿರಲಿಲ್ಲ. ತನ್ನ ಸರಳ ಸ್ವಭಾವದಿಂದಾಗಿ ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದಳು. ಬಿ.ಎ.ಪದವಿ ಪೂರ್ಣ ಗೊಳಿಸುತ್ತಲೇ ವಿನಯ್ ನೊಂದಿಗೆ ವಿವಾಹ ಜರುಗುತ್ತದೆ. ವಿನಯ್ ಸಮಾಜಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. ಹಸನ್ಮುಖಿ ಸದಾಸುಖಿ ಎನ್ನುವಂತೆ ತಾನೂ ನಗುತ್ತಾ ಇತರರನ್ನೂ ನಗಿಸುತ್ತಾ ಸದಾ ಉಲ್ಲಾಸದಿಂದಿರುತ್ತಿದ್ದ. ತನ್ನ ಪ್ರಭಾವಿ ಬೋಧನೆಯಿಂದಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕನಾಗಿದ್ದ. ವಿನಯ್ ವಿಜಯಾಳನ್ನು ಇಷ್ಟಪಟ್ಟು ಮದುವೆಯಾಗಿದ್ದ. ಅವಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಸಿನೇಮಾ ಪಾರ್ಕು ಎಂದೆಲ್ಲ ಸುತ್ತಾ ಡಿಸುತ್ತಿದ್ದ. ನೋಡಿದವರು ಇವರ ಜೋಡಿ ಹೇಳಿ ಮಾಡಿಸಿದಂತಿದೆ ಎಂದು ಅಭಿಮಾನದಿಂದ ನುಡಿಯುವರು. ವಿನಯ್ ವಿಜಯಾಳ ಉನ್ನತ ಶಿಕ್ಷಣಕ್ಕೂ ಪ್ರೋತ್ಸಾಹ ನೀಡಿದ. ಮದುವೆಯಾಗಿ ಆರು ವರ್ಷ ಕಳೆದರೂ ಇವರಿಗೆ ಸಂತಾನ ಭಾಗ್ಯ ಲಭಿಸಲಿಲ್ಲ. ತಂದೆಯಾಗುವ ಬಯಕೆ ವಿನಯನಿಗೆ, ತಾಯಿಯಾಗುವ ಬಯಕೆ ವಿಜಯಾಳಿಗೆ ದಿನೇ ದಿನೇ ಹೆಚ್ಚಾಗತೊಡಗಿತು. ಮಗುವಿಗಾಗಿ ಕಂಡ ಕಂಡ ದೇವರಿಗೆ ಹರಕೆ ಹೊತ್ತರು. ಹೆಸರಾಂತ ವೈದ್ಯರನ್ನೂ ಸಂಪರ್ಕಿಸಿದರು. ಮಕ್ಕಳಾಗುವ ಎಲ್ಲ ಲಕ್ಷಣಗಳೂ ಇವೆ. ನಿಶ್ಚಿತ ನಿಮಗೆ ಮಕ್ಕಳಾಗುತ್ತವೆ ಎಂದು ವೈದ್ಯರು ಅವರಿಗೆ ಭರವಸೆ ನೀಡಿದರು. ವಿನಯ್ ತನ್ನ ಬೈಕ್ ನಲ್ಲಿ ಕಾಲೇಜಿಗೆ ತೆರಳುತ್ತಿರುವಾಗ ಹಿಂದಿನಿAದ ವೇಗವಾಗಿ ಬಂದ ಲಾರಿ ಜೋರಾಗಿ ಗುದ್ದಿ ಬಿಟ್ಟಿತು. ತಲೆಗೆ ಭಾರಿ ಪೆಟ್ಟು ಬಿದ್ದು ರಕ್ತಸ್ರಾವಾಗ ತೊಡಗಿತು. ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ದಾರಿ ಮಧ್ಯದಲ್ಲಿಯೇ ಅಸು ನೀಗಿದ. ವಿಜಯಾಳಿಗಾದ ಆಘಾತ ಅಷ್ಟಿಷ್ಟಲ್ಲ. ಪ್ರೀತಿಪಾತ್ರನಾಗಿದ್ದ ಪತಿಯನ್ನು ಕಳೆದುಕೊಂಡು ವಿಜಯಾ ವಿಧವೆಯಾದಳು. ನೋಡಲು ಚನ್ನಾಗಿದ್ದರೇನು? ಅವಳ ಹಣೆಬರಹ ಚನ್ನಾಗಿಲ್ಲವೆಂದು ಜನರು ಅಂದಾಡಿಕೊಳ್ಳತೊಡಗಿದರು.ಹದಿ ಹರೆಯದ ವಿಜಯಾಳನ್ನು ತವರಿಗೆ ಕರೆದೊಯ್ಯಲು ಬಂದ ತಂದೆಗೆ ತಾನು ಶಾಶ್ವತವಾಗಿ ಗಂಡನ ಮನೆಯಲ್ಲೆ ಇರುವುದಾಗಿ ತನ್ನ ನಿರ್ಧಾರವನ್ನು ತಿಳಿಸಿಬಿಟ್ಟಳು.ಇದ್ದ ಒಬ್ಬ ಮಗನನ್ನು ಕಳೆದುಕೊಂಡ ವಿನಯ್ ನ ತಂದೆತಾಯಿ ದು:ಖತಪ್ತರಾದರು. ಸೊಸೆ ವಿಜಯಾಳನ್ನು ತಮ್ಮ ಸ್ವಂತ ಮಗಳಂತೆ ನೋಡಿಕೊಳ್ಳುವರು. ಅವಳ ವೈಧವ್ಯವನ್ನು ಕಂಡು ಮಮ್ಮಲ ಮರುಗುವರು. ಅವಳ ಭವಿಷ್ಯದ ಬಗ್ಗೆಯೂ ಚಿಂತನೆ ಮಾಡುವರು. ವಿಜಯಾ, ಅತ್ತೆ ಮಾವನ ಒತ್ತಾಸೆಯ ಮೇರೆಗೆ ವಿನಯ್ ಕೆಲಸಕ್ಕಿದ್ದ ಕಾಲೇಜಿನಲ್ಲಿಯೇ ಅರೆಕಾಲಿಕ ಉಪನ್ಯಾಸಕಿಯಾಗಿ ಸೇರಿಕೊಂಡಳು. ತನ್ನ ಒಳ್ಳೆಯ ಗುಣನಡತೆಯಿಂದಾಗಿ ಎಲ್ಲ ಸಹೋದ್ಯೋಗಿಗಳ ಪ್ರೀತಿಗೆ ಪಾತ್ರಳಾದಳು. ವಿನಯ್ ಮತ್ತು ವಿವೇಕ ಒಂದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ವಿನಯ್ ಸಮಾಜಶಾಸ್ತ್ರದ ಬೋಧನೆ ಮಾಡುತ್ತಿದ್ದರೆ ವಿವೇಕ್ ಕನ್ನಡ ವಿಷಯದ ಪಾಠ ಮಾಡುತ್ತಾನೆ. ಸಮಾನ ವ್ಯಸನೇಷು ಸಖ್ಯಂ ಎನ್ನುವಂತೆ ಈರ್ವರ ಹವ್ಯಾಸಗಳು ಬಹುತೇಕವಾಗಿ ಒಂದೆಯಾದ್ದರಿAದ ಅವರಲ್ಲಿ ಗಾಢ ಗೆಳೆತನ ಬೆಳೆದು ಬಂದಿತ್ತು. ವಿನಯ್ ನಂತೆ ವಿವೇಕನೂ ಇತರರ ಕಷ್ಟಕ್ಕೆ ಸ್ಪಂದಿಸುವ ಹೃದಯವಂತನೂ ಆಗಿದ್ದ. ವಿವೇಕ್ ತನ್ನ ಇಬ್ಬರೂ ತಂಗಿಯರ ಮದುವೆ ಮಾಡುವಷ್ಟರಲ್ಲಿ ಮೂವತ್ತೈದು ವಯಸ್ಸು ದಾಟಿ ಹೋಗುತ್ತದೆ. ವಿಜಯಾಳನ್ನು ಮದುವೆಯಾದರೆ ಹೇಗೆ? ಎಂದು ಯೋಚಿಸತೊಡಗಿದ. ಆಕೆ ವಿಧವೆ ಯಾಗಿದ್ದುದರಲ್ಲಿ ಅವಳದೇನೂ ತಪ್ಪಿಲ್ಲ. ಇಡೀ ಬದುಕು ಒಂಟಿಯಾಗಿ ಕಳೆಯುವುದು ನ್ಯಾಯವಲ್ಲ. ಅವಳನ್ನು ಮದುವೆಯಾಗಿ ಒಂದೊಳ್ಳೆ ಬಾಳು ಕೊಡುವುದು ಉಚಿತವೆಂಬ ನಿರ್ಧಾರಕ್ಕೆ ಬರುತ್ತಾನೆ. ವಿಜಯಾಳ ಅತ್ತೆ ಮಾವರಿಗೆ ತನ್ನ ಇಂಗಿತವನ್ನು ತಿಳಿಸುತ್ತಾನೆ. ವಿಧವೆಯನ್ನು ಮದುವೆಯಾಗಲು ಮುಂದೆ ಬಂದ ವಿವೇಕನ ಬಗ್ಗೆ ತುಂಬಾ ಹೆಮ್ಮೆ ಎನಿಸುತ್ತದೆ. ಆದರೆ ವಿಜಯಾ ಈ ವಿವಾಹವನ್ನು ನಿರಾಕರಿಸಿ ಬಿಡುತ್ತಾಳೆ. ವಿನಯ್ ನ ನೆನಪಿನಲ್ಲೇ ಇರುವುದಾಗಿ ತನ್ನ ನಿರ್ಧಾರವನ್ನು ತಿಳಿಸುತ್ತಾಳೆ. ನಿನಗಿನ್ನು ಹರೆಯದ ಪ್ರಾಯ. ಸಮಾಜದಲ್ಲಿ ಎಲ್ಲರು ಒಳ್ಳೆಯವರಿರುವುದಿಲ್ಲ. ಕೆಟ್ಟ ದೃಷ್ಟಿಯ ಗಂಡಸರಿAದ ರಕ್ಷಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ತಿಳಿಹೇಳುತ್ತಾರೆ.ಉದಾರ ಗುಣದ ವಿವೇಕನೊಂದಿಗೆ ವಿಜಯಾಳ ಲಗ್ನ ಮಾಡಿ ಸುಖವಾಗಿರು ಎಂದು ಶುಭ ಹಾರೈಸುತ್ತಾರೆ. ವಿವೇಕ್ ವಿಜಯಾಳನ್ನು ಪ್ರೀತಿ ಹಾಗೂ ಗೌರವದಿಂದ ಕಾಣುತ್ತಾನೆ. ಇವರೀರ್ವರ ದಾಂಪತ್ಯದ ಫಲವಾಗಿ ಇಬ್ಬರು ಮಕ್ಕಳು ಜನಿಸುತ್ತಾರೆ. ದೀಯಾ ಮತ್ತು ಧೀರಜ್ ಬೆಳೆದು ದೊಡ್ಡವರಾಗತೊಡಗುತ್ತಾರೆ. ವಿಜಯಾಳಿಗೆ ಸ್ವರ್ಗ ಮೂರೇ ಗೇಣು ಎನ್ನುವಂತಾಗುತ್ತದೆ. ಆದರೆ ಅವಳ ಬಾಳಿನಲ್ಲಿ ಇನ್ನೊಂದು ದುರ್ಘಟನೆ ನಡೆಯುತ್ತದೆ. ವಿವೇಕ್ ನಿಗೆ ಕ್ಯಾನ್ಸರ್ ಉಲ್ಬಣಗೊಂಡು ಕೊನೆಯ ಹಂತಕ್ಕೆ ತಲುಪುತ್ತದೆ. ಪ್ರಾರಂಭಿಕ ಹಂತದಲ್ಲಿದ್ದರೆ ಚಿಕಿತ್ಸೆ ನೀಡಿ ಗುಣ ಪಡಿಸಬಹುದಿತ್ತು,ಈಗ ಕೈಮೀರಿ ಹೋಗಿದೆ ಎಂದು ವೈದ್ಯರು ಕೈಚೆಲ್ಲಿಬಿಟ್ಟರು. ವಿವೇಕ್ ಇಹಲೋಕದ ಯಾತ್ರೆಯನ್ನು ಮುಗಿಸಿಬಿಟ್ಟ. ವಿಜಯಾಳಿಗೆ ಎರಡನೆ ಬಾರಿ ವೈಧವ್ಯ ಬಂದೆರಗಿತು. ತನ್ನ ಹಣೆಬರಹವನ್ನು ನೆನೆದು ದು:ಖತಪ್ತಳಾದಳು. ಕರ್ತವ್ಯದ ಕರೆ ಅವಳನ್ನು ಕೈಬೀಸಿ ಕರೆಯಿತು. ಮಕ್ಕಳಿಬ್ಬರ ಜವಾಬ್ದಾರಿ ಅವಳನ್ನು ಬಡಿದೆಚ್ಚರಿಸಿತು.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads